ಸಿದ್ಧಿಯೆಂದರೆ ಕೆಲಸ ಕೈಗೂಡುವುದು (ಕ್ರಿಯಾಸಿದ್ಧಿ). ಸಾಮಾನ್ಯವಾಗಿ ಈ ಮಾತನ್ನು ಅಲೌಕಿಕವಾಗಿರುವ ಕೌಶಲಗಳನ್ನು ಪಡೆಯುವುದಕ್ಕೆ ಬಳಸುತ್ತಾರೆ. ಸಿದ್ಧಿಯೆಂದರೆ ತುಂಬ ಚಮತ್ಕಾರದ ಅದ್ಭುತಶಕ್ತಿ. ತಪಶ್ಚರ್ಯೆಯಿಂದಲೋ ಮಂತ್ರತಂತ್ರಗಳ ಅನುಸಂಧಾನದಿಂದಲೋ ದೈವಿಕ ಅನುಗ್ರಹದಿಂದಲೋ ಮನುಷ್ಯರು ಪಡೆಯುವ ವಿಶೇಷಸಾಮರ್ಥ್ಯ. ಇದನ್ನು ಎಂಟೆಂದು ಪರಿಗಣಿಸಿದ್ದಾರೆ. ಅಣಿಮಾ (ಅತಿ ಸಣ್ಣ ಆಕಾರವನ್ನು ಪಡೆಯುವುದು), ಮಹಿಮಾ (ಅತಿ ದೊಡ್ಡ ಆಕಾರವನ್ನು ಪಡೆಯುವುದು), ಗರಿಮಾ (ತುಂಬ ಭಾರವಾಗುವುದು), ಲಘಿಮಾ (ತುಂಬ ಹಗುರವಾಗಿ ಗಾಳಿಯಲ್ಲಿ ಹಾರಾಡುವುದು), ಪ್ರಾಪ್ತಿ (ಸಾಮಾನ್ಯವಾಗಿ ಪಡೆಯಲಾರದುದನ್ನು ಪಡೆಯುವುದು), ಪ್ರಾಕಾಮ್ಯ (ಸ್ವಲ್ಪವಾಗಿರುವ ಪದಾರ್ಥವನ್ನು ಹೆಚ್ಚಿಸುವ ಶಕ್ತಿ), ಈಶಿತ್ವ (ಎಲ್ಲ ಸಂದರ್ಭ ಗಳಲ್ಲಿಯೂ ಒಡೆತನವನ್ನು ಮಾಡಿ ತನ್ನ ಪ್ರಭಾವವನ್ನು ಬೀರುವುದು) ಮತ್ತು ವಶಿತ್ವ (ಇಂದ್ರಿಯಗಳನ್ನು ನಿಯಮನ ಮಾಡಿಕೊಳ್ಳುವುದು) ಇವು ಅಷ್ಟಸಿದ್ಧಿಗಳು. ಯೋಗಮಾರ್ಗದಲ್ಲಿ ಹಠಯೋಗವನ್ನು ಹಿಡಿದವರು ಈ ಸಿದ್ಧಿಗಳನ್ನು ಪಡೆಯುತ್ತಾರೆಂದು ನಂಬಿಕೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ